ನವದೆಹಲಿ, ಮೇ 22: ಕಾಂಗೋ ಮತ್ತು ಉಗಾಂಡಾದಲ್ಲಿ ಎಬೋಲಾ ಅಬ್ಬರದ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆಯಿಂದ ತುರ್ತು ಪರಿಸ್ಥಿತಿ ಘೋಷಣೆ ಹಿನ್ನಲೆ ದೇಶದವಿಮಾನ ನಿಲ್ದಾಣಗಳು ಮತ್ತು ಬಂದರುಗಳಲ್ಲಿ ಪ್ರಯಾಣಿಕರ ತಪಾಸಣೆಗೆ ಕೇಂದ್ರ ಆರೋಗ್ಯ ಸಚಿವಾಲಯ ಕಟ್ಟುನಿಟ್ಟಿನ ಆದೇಶ ನೀಡಿದೆ. ಪ್ರಯಾಣಿಕರ ಸುರಕ್ಷತೆ ಹಾಗೂ ಅಂತಾರಾಷ್ಟ್ರೀಯ ಆರೋಗ್ಯ ನಿಯಮಾವಳಿಗಳ ಹಿತದೃಷ್ಟಿಯಿಂದ ಆರೋಗ್ಯ ತಪಾಸಣೆ ಮತ್ತು ಸಾರ್ವಜನಿಕ ಆರೋಗ್ಯ ಕ್ರಮಗಳಿಗೆ ಸಹಕರಿಸಿ ಎಂದು ಸಲಹೆಯಲ್ಲಿ ತಿಳಿಸಲಾಗಿದೆ.
ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ, ಉಗಾಂಡಾ ಹಾಗೂ ದಕ್ಷಿಣ ಸೂಡಾನ್ನಿಂದ ಭಾರತಕ್ಕೆ ಬರುವ ಅಥವಾ ಆ ದೇಶಗಳ ಮೂಲಕ ಪ್ರಯಾಣಿಸುವವರು ಜ್ವರ, ದೌರ್ಬಲ್ಯ, ತಲೆನೋವು, ಸ್ನಾಯು ನೋವು, ವಾಂತಿ, ಅತಿಸಾರ, ಗಂಟಲು ನೋವು ಹಾಗೂ ಅಸ್ಪಷ್ಟ ರಕ್ತಸ್ರಾವದಂತಹ ಲಕ್ಷಣಗಳು ಕಂಡುಬಂದರೆ ತಪಾಸಣೆಗೂ ಮುನ್ನ ವಿಮಾನ ನಿಲ್ದಾಣದ ಆರೋಗ್ಯಾಧಿಕಾರಿ ಅಥವಾ ಆರೋಗ್ಯ ಡೆಸ್ಕ್ ಅನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.
